ಮೀರ್ ಕಾಸಿಮ್ -
ಬಂಗಾಲದ ನವಾಬ. ಮೀರ್ ಜಾಫರನ ಅಳಿಯ. ಪದಚ್ಯುತಿಗೊಂಡ ಮೀರ್‍ಜಾಫರನ ಸ್ಥಾನದಲ್ಲಿ 1760ರಲ್ಲಿ ಬಂಗಾಲದ ನವಾಬನನ್ನಾಗಿ ಇಂಗ್ಲಿಷರು ಪ್ರತಿಷ್ಠಾಪಿಸಿದರು. ಕಂಪನಿಗೆ ಬದ್ರ್ವಾನ್, ಮಿದ್ನಾಪುರ ಮತ್ತು ಚಿಟ್ಟಗಾಂಗ್ - ಈ ಮೂರು ಜಿಲ್ಲೆಗಳನ್ನು ಬಿಟ್ಟುಕೊಡುವುದು. ಕಲ್ಕತ್ತೆಯ ಕೌನ್ಸಿಲಿಗೆ 20 ಲಕ್ಷ ರೂಪಾಯಿಗಳ ನಗದು ನೀಡುವುದು ; ಹಾಗೂ ಮೀರ್‍ಜಾಫರ್ ಕೊಡಬೇಕಾಗಿದ್ದ ಬಾಕಿಯನ್ನು ತೀರಿಸುವುದಕ್ಕೆ ಸಮ್ಮತಿಸುವುದರ ಮೂಲಕ ಮೀರ್ ಕಾಸಿಮ್ ಈ ಅಧಿಕಾರ ಪಡೆದುಕೊಂಡ. ಈತ ಮೀರ್‍ಜಾಫರನಿಗಿಂತ ಹೆಚ್ಚು ಸಮರ್ಥನೂ ದೃಢಮನಸ್ಕನೂ ಆಗಿದ್ದ. ಈತ ಕಂದಾಯ ವ್ಯವಸ್ಥೆಯನ್ನು ಕಟ್ಟುನಿಟ್ಟುಗೊಳಿಸಿದ; ರಾಜ್ಯದ ಹುಟ್ಟುವಳಿಯನ್ನು ಇಮ್ಮಡಿಗೊಳಿಸಿದ. ಶಿಸ್ತಿನ ಸೇನೆಯನ್ನು ವ್ಯವಸ್ಥೆಗೊಳಿಸಿದ; ಕಲ್ಕತ್ತೆಯ ಕೌನ್ಸಿಲ್‍ನ ಅನಗತ್ಯ ಹಸ್ತಕ್ಷೇಪದಿಂದ ಮುಕ್ತನಾಗುವ ಸಲುವಾಗಿ ತನ್ನ ರಾಜಧಾನಿಯನ್ನು ಮುರ್ಷಿದಾಬಾದಿನಿಂದ ಮಾಂಘೀರಿಗೆ ವರ್ಗಾಯಿಸಿದ. ಮೀರ್ ಜಾಫರನ ಕಾಲದಿಂದ (1757-60) ಕಂಪನಿಯ ಅಧಿಕಾರಿಗಳು ನ್ಯಾಯವಿರುದ್ಧವಾಗಿ ಅನುಭವಿಸುತ್ತಿದ್ದ ಮುಕ್ತ ಖಾಸಗಿ ವ್ಯಾಪಾರದ ಹಕ್ಕಿನ ದುರುಪಯೋಗವನ್ನು ನಿಲ್ಲಿಸಲು ತೀರ್ಮಾನಿಸಿ. ಕಲ್ಕತ್ತೆಯ ಕೌನ್ಸಿಲಿನ ಆಗಿನ ಅಧ್ಯಕ್ಷ ವಾನಿಸ್ಟಾರ್ಟ್‍ನೊಡನೆ ಒಂದು ಒಪ್ಪಂದ ಮಾಡಿಕೊಂಡ. ಆದರೆ ಕಲ್ಕತ್ತೆಯ ಕೌನ್ಸಿಲ್ ಈ ವ್ಯವಸ್ಥೆಯನ್ನು ತಿರಸ್ಕರಿಸಿತು. ಉಪ್ಪಿನ ಮೇಲೆ ಮಾತ್ರ ಶೇಕಡಾ 2.5 ದರವನ್ನು ಬಿಟ್ಟು ಬೇರೆ ಸುಂಕವಸೂಲಿಗೆ ಅದು ಒಪ್ಪಲಿಲ್ಲ. ಈ ತೀರ್ಮಾನದಿಂದ ಕೆರಳಿದ ಮೀರ್ ಕಾಸಿಮ್ ಭಾರತೀಯ ಹಾಗೂ ಯೂರೋಪಿನ ವರ್ತಕರಿಬ್ಬರಿಗೂ ಎಲ್ಲ ಸುಂಕಗಳಿಂದ ವಿನಾಯಿತಿ ನೀಡಿದ. ಕಂಪನಿ ಹಾಗೂ ಮೀರ್ ಕಾಸಿಮ್ ಇವರ ನಡುವೆ ಹಲವು ವಿಷಯಗಳಲ್ಲಿ ತೀವ್ರ ವೈಷಮ್ಯ ಏರ್ಪಟ್ಟಿತು. ಹೀಗಾಗಿ ನವಾಬ ಮತ್ತು ಕಂಪನಿಯ ನಡುವೆ ಯುದ್ಧ ಅನಿವಾರ್ಯವಾಯಿತು. ಪಾಟ್ನಾದಲ್ಲಿ ಇಂಗ್ಲಿಷ್ ಕೋಠಿಯ ಮುಖ್ಯಸ್ಥನಾಗಿದ್ದ ಎಲ್ಲಿಸ್ ಆ ನಗರವನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸಿದಾಗ ಅದು ವಿಫಲಗೊಂಡು ಯುದ್ದ ಪ್ರಾರಂಭವಾಯಿತು (1763). ಆದರೆ ಮೀರ್ ಕಾಸಿಮ್ ಸಮರಚತುರನಾಗಿರಲಿಲ್ಲ; ಅವನಲ್ಲಿ ಸಮರ್ಥ ಸೇನಾಧಿಪತಿಯೂ ಇರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಕಾಟ್ವಾ, ಮುರ್ಷಿದಾಬಾದ್. ಘೇರಿಯಾ. ಸೂಟಿ ಉದಯನಲಾಗಳಲ್ಲಿ ಕಂಪನಿಯ ಸೇನೆಗಳಿಂದ ಪರಾಭವಗೊಂಡ ಇಂಗ್ಲಿಷ್ ಸೇನೆ ತನ್ನ ರಾಜಧಾನಿ ಮಾಂಘೀರನ್ನು ಸಮೀಪಿಸುತ್ತಿದ್ದಂತೆ ಪಾಟ್ನಾಕ್ಕೆ ಮೀರ್ ಕಾಸಿಮ್ ಪಲಾಯನ ಮಾಡಿದ. ಅಲ್ಲಿ ತನ್ನ ವಶದಲ್ಲಿದ್ದ ಎಲ್ಲ ಇಂಗ್ಲಿಷ್ ಯುದ್ಧಖೈದಿಗಳನ್ನು ಹಾಗೂ ತನ್ನ ಕೈಗೆ ಸಿಕ್ಕಿದ ಜಗತ್ ಸೇಠ್ ಮೊದಲಾದ ಭಾರತೀಯ ವಿರೋಧಿಗಳನ್ನು ಕೊಂದು ಔದ್‍ಗೆ ಪಲಾಯನ ಮಾಡಿದ. ಬಂಗಾಲವನ್ನು ಇಂಗ್ಲಿಷರಿಂದ ಮರಳಿ ಪಡೆಯುವ ದೃಷ್ಟಿಯಿಂದ ಔದ್‍ನ ನವಾಬ ಷೂಜ-ಉದ್-ದೌಲ ಹಾಗೂ ದೇಶಭ್ರಷ್ಟ ಮೊಗಲ್ ಸಾಮ್ರಾಟ ಎರಡನೆಯ ಷಾ ಆಲಮ್ ಇವರೊಡನೆ ಕಂಪನಿಗೆ ಪ್ರತಿಯಾಗಿ ಒಂದು ಒಕ್ಕೂಟ ರೂಪಿಸಿದ. ಅದರೆ 1764ರ ಅಕ್ಟೋಬರ್ 22ರಂದು ಬಕ್ಸಾರಿನಲ್ಲಿ ನಡೆದ ಕದನದಲ್ಲಿ ಇಂಗ್ಲಿಷ್ ಸೇನಾಧಿಪತಿ ಮೇಜರ್ ಹೆಕ್ಸರ್ ಮನ್ರೋ ಈ ಒಕ್ಕೂಟದ ಸೇನೆಯನ್ನು ಸಂಪೂರ್ಣವಾಗಿ ಪರಾಭವಗೊಳಿಸಿದ. ಷೂಜ-ಉದ್-ದೌಲ ತಲೆ ತಪ್ಪಿಸಿಕೊಂಡು ರೋಹಿಲಖಂಡಕ್ಕೆ ಪಲಾಯನಗೈದ. ಷಾ ಆಲಮ್ ತಕ್ಷಣವೇ ಇಂಗ್ಲಿಷರ ಕಡೆ ಸೇರಿಕೊಂಡ. ಮೀರ್ ಕಾಸಿಮ್ ದೇಶಭ್ರಷ್ಟನಾದ. ಮುಂದೆ ತೀವ್ರಬಡತನ ಅನುಭವಿಸಿ 1771ರಲ್ಲಿ ದೆಹಲಿಯಲ್ಲಿ ಕಾಲವಾದ.						  
(ಎನ್.ಎಸ್.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ